ಮಲಯೊ ಪಾಲಿನೇಷ್ಯನ್ ಭಾಷೆಗಳು -
ಪ್ರಪಂಚದ ಪ್ರಮುಖ ಭಾಷಾ ವರ್ಗಗಳ ಪೈಕಿ ಒಂದು. ಆಸ್ಟ್ರೊನೇಷ್ಯನ್ ಭಾಷೆಗಳು ಎಂಬುದು ಇದರ ಪರ್ಯಾಯ ನಾಮ. ಆ ವರ್ಗಕ್ಕೆ ಸೇರಿದ ಭಾಷೆಗಳ ಸಂಖ್ಯೆ ಸುಮಾರು ಮುನ್ನೂರು. ಇವು ಫಾರ್ಮೋಸದ ಉತ್ತರದಿಂದ ನ್ಯೂಜಿಲೆಂಡಿನ ದಕ್ಷಿಣದವರೆಗೆ ಮತ್ತು ಪಶ್ಚಿಮದಲ್ಲಿ ಮಡಗಾಸ್ಕರಿನಿಂದ (ಮ್ಯಾಲಗ್ಯಾಸೀ) ಪೂರ್ವದ ಈಸ್ಟರ್ ದ್ವೀಪಗಳವರೆಗೆ (ಆಸ್ಟ್ರೇಲಿಯ, ಟಾಸ್ಮೇನಿಯ, ನ್ಯೂಗಿನಿ ಹೆರತಾಗಿ) ವ್ಯಾಪಿಸಿವೆ. ಇವನ್ನಾಡುವವರ ಸಂಖ್ಯೆ ಸುಮಾರು ಹನ್ನೊಂದು ಕೋಟಿ ಎಂಬುದಾಗಿ ಅಂದಾಜು ಮಾಡಲಾಗಿದೆ.

ಈ ಭಾಷಾವರ್ಗವನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸದೆ. 1. ಇಂಡೋನೇಷ್ಯನ್ (ಮಲಯನ್) ಫಾರ್ಮೋಸ, ಫಿಲಿಪಿನ್ಸ್, ಇಂಡೋನೇಷ್ಯ ದ್ವೀಪಗಳಲ್ಲಿ ಬಳಕೆಯಲ್ಲಿರುವ ಇನ್ನೂರಕ್ಕೂ ಹೆಚ್ಚು ಭಾಷೆಗಳು ಈ ಗುಂಪಿಗೆ ಸೇರಿವೆ. ಈ ಪೈಕಿ ಜಾವನೀಸ್, ದಯಕ್, ಬಲಿನೀಸ್, ಮಕಸ್ಸರ್, ಮದುರನ್, ಮ್ಯಾಲಗ್ಯಾಸೀ, ಮಲಯ ವಿಸಯ ಮುಖ್ಯಭಾಷೆಗಳು. 2.ಮೆಲನೇಷ್ಯನ್, ಫೀಜಿ ಸಾಂತಕ್ರೂಜ್, ಸಾಲೊಮನ್ ದ್ವೀಪಗಳಲ್ಲಿ ಬಳಕೆಯಲ್ಲಿರುವ ಸುಮಾರು ಮುವತ್ತೈದು ಭಾಷೆಗಳು ಈ ಗುಂಪಿಗೆ ಸೇರಿವೆ, ಇವುಗಳ ವೈಶಿಷ್ಯ್ಟವೆಂದರೆ ಕೆಲವು ಭಾಷೆಗಳಲ್ಲಿ ಮೂರು ಬಗೆಯ ವಚನ ವ್ಯವಸ್ಥೆ ಇದ್ದರೆ (ಏಕವಚನ, ದ್ವಿವಚನ, ಬಹುವಚನ) ಮತ್ತೆ ಕೆಲವು ಭಾಷೆಗಳಲ್ಲಿ ನಾಲ್ಕು ಬಗೆಯ ವಚನ ವ್ಯವಸ್ಥೆ ಇದೆ. (ಏಕವಚನ, ದ್ವಿವಚನ, ತ್ರಿವಚನ, ಚತುರ್ವವಚನ್), 3. ಮೈಕ್ರೊನೇಷ್ಯನ್: ಗಿಲ್ಬರ್ಟ ಮಾರ್ಷೆಲ್ದ್ವೀಪ ಭಾಷೆಗಳು ಈ ಗುಂಪಿಗೆ ಸೇರಿವೆ, 4. ಪಾಲಿನೇಷ್ಯನ್; ನ್ಯೂಜಿಲೆಂಡ್, ಸಮೋವ್, ಹವಾಯಿ ದ್ವೀಪಗಳಲ್ಲಿ ಚಾಲ್ತಿಯಲ್ಲಿರುವ ಇಪ್ಪತ್ತಕ್ಕೂ ಹೆಚ್ಚು ಭಾಷೆಗಳು ಈ ಗುಂಪಿಗೆ ಸೇರಿವೆ. ತಹೀತಿ, ಮಾವೋರಿ, ಸಮೋವ, ಹವಾಯಿ ಮುಖ್ಯ ಭಾಷೆಗಳು. ಇವುಗಳನ್ನಾಡುವ ಜನ, ಸೌಲಭ್ಯದ ದೃಷ್ಟಿಯಿಂದ ಪದ ಮತ್ತು ವಾಕ್ಯರಚನೆಯಲ್ಲಿ ವ್ಯಂಜನ ಧ್ವನಿಗಳನ್ನು ಆದಷ್ಟು ನಿವಾರಿಕೊಳ್ಳುವರು.

ಬೇರೆ ಬೇರೆ ಭಾಷಾಗುಂಪುಗಳಿಗೆ ಸೇರಿದ್ದರೂ ಕೆಲವು ಭಾಷೆಗಳಲ್ಲಿ ವ್ಯಾಕರಣಾತ್ಮಕ ಅಂಶಗಳು ಸಮಾನವಾಗಿವೆ. ಉದಾಹರಣೆಗೆ ಮ್ಯಾಲಗ್ಯಾಸೀ ಮತ್ತು ಸಮೋವ ಭಾಷೆಗಳಲ್ಲಿಯ ಸಂಖ್ಯಾವಾಚಕಗಳನ್ನು ಗಮನಿಸಬಹುದು

ಮ್ಯಾಲಗ್ಯಾಸೀ                     ಸಮೋವ                   ಸಂಖ್ಯಾವಾಚಕ
ರೋವ        ...                 ಲೂವ           ...          ಎರಡು
ತೆಲೊ                           ತೊಲು                      ಮೂರು
ಇಫತ್ರ                           ಫ                         ನಾಲ್ಕು
ದಿಮೈ                           ಲಿಮ                       ಐದು
ಇನೈನ                           ಒನೊ                      ಆರು
ಫಿತೊ                           ಫಿತು                       ಏಳು
ವಲೊ                           ವಲು                      ಎಂಟು
ಸಿವೈ                            ಇವ                       ಒಂಬತ್ತು
ಪೊಲೊ                         ಸೆಪುಲು                     ಹತ್ತು

ಈ ಭಾಷಾವರ್ಗಕ್ಕೆ ಸೇರಿದ ಭಾಷೆಗಳ ಮೇಲೆ ಅನ್ಯಭಾಷಾಪ್ರಭಾವ ಹೆಚ್ಚಾಗಿ ಆಗಿಲ್ಲ. ಆದುದರಿಂದ ಈ ಭಾಷೆಗಳು ಸ್ವಂತಿಕೆಯನ್ನು ಉಳಿಸಿಕೊಂಡಿವೆ. ಜೀವನ ನಿರ್ವಹಣೆಗಾಗಿ ದ್ವೀಪಗಳಲ್ಲಿಯ ಜನ ಇತ್ತೀಚೆಗೆ ವಲಸೆ ಹೋಗಿತ್ತಿರುವುದರಿಂದ ಜನಬಳಕೆಯಲ್ಲಿ ಕಡಿಮೆಯಿರುವ ಭಾಷೆಗಳು ಕಣ್ಮರೆಯಾಗುವ ಸಾಧ್ಯತೆ ಹೆಚ್ಚಾಗುತ್ತಿದೆ. ಇದನ್ನು ಅರಿತ ಅನೇಕ ವಿದೇಶಿ ವಿದ್ವಾಂಸರು ಈ ವರ್ಗದ ಭಾಷೆಗಳ ಅಧ್ಯಯನ ನಡೆಸಿದ್ದಾರೆ. ಇವರ ಪೈಕಿ ಮಾರ್ಗರೆಟ್ ಮೀಡ್ಕೆನೆತ್ ಎಲ್. ಪೈಕ್ ಮುಖ್ಯರು.
(ಐ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ